Saturday, 4 August 2018

ಋಗ್ವೇದದ ಪ್ರಾರಂಭ ಸೂಕ್ತದ ಭಾವಾನುವಾದ

ಯಜ್ಞದ ಪುರೋಹಿತನಾದ, ದೇವನಾದ, ಹೋತೃವೆಂಬ ಋತ್ವಿಜನಾದ, ರತ್ನಧಾತನಾದ ಅಗ್ನಿಯನ್ನು ಸ್ತೋತ್ರಮಾಡುತ್ತೇನೆ. (ಮೊದಲನೇ ಋಕ್ಕು)

ಅಗ್ನಿಯು ಪೂರ್ವದ ಋಷಿಗಳಿಂದ ಸ್ತುತಿಸಲ್ಪಟ್ಟಿದ್ದಾನೆ. ಮತ್ತು ನೂತನರಿಂದಲೂ ಸ್ತುತಿಸಲ್ಪಡುವಂಥ ಇವನು ದೇವರನ್ನು ಇಲ್ಲಿಗೆ ಕರೆದುಕೊಂಡುಬರುವನು. (ಎರಡನೇ ಋಕ್ಕು)

ಅಗ್ನಿಯಿಂದ ಅಭಿವೃದ್ಧಿಯಾಗುವ ಧನವನ್ನು, ಯಶಸ್ಸನ್ನೂ, ವೀರವತ್ತಮರನ್ನೂ (ಯಜಮಾನನು) ಹೊಂದಲಿ.  (ಮೂರನೇ ಋಕ್ಕು)

ಅಗ್ನಿಯೇ, ಹಿಂಸಾರಹಿತವಾದ ಯಾವ ಯಜ್ಞವನ್ನು ಎಲ್ಲಾ ದಿಕ್ಕಿನಿಂದಲೂ ಸುತ್ತುವರೆದಿರುತ್ತೀಯೋ, ಅದೇ ಯಜ್ಞವು ದೇವರುಗಳಲ್ಲಿ ಹೋಗುತ್ತದೆ.  (ನಾಲ್ಕನೇ ಋಕ್ಕು)

ಅಗ್ನಿಯು ಹೋತಾ ಆಗಿದ್ದಾನೆ. ತಿಳಿದವನಾಗಿದ್ದಾನೆ. ಅನೃತವನ್ನು ಆಡದೇ ನಾನಾ ಕೀರ್ತಿಗಳಿಂದ ಕೂಡಿರುವನು. ಇವನು ದೇವತೆಗಳೊಂದಿಗೆ ಆಗಮಿಸಲಿ.  (ಐದನೇ ಋಕ್ಕು)

ಎದುರಿಗಿರುವ ಅಗ್ನಿಯೇ, ನೀನು ಪ್ರೀತ್ಯರ್ಥವಾಗಿ ಮಂಗಳವನ್ನು ಮಾಡುವೆಯೋ, ಅದು ನಿನ್ನದೇ ಆಗಿರುವುದು ಸತ್ಯವು. (ಆರನೇ ಋಕ್ಕು)

ಅಗ್ನಿಯೇ, ನಾವು ಪ್ರತಿದಿನವೂ, ರಾತ್ರಿಹಗಲೂ, ಬುದ್ಧಿಪೂರ್ವಕವಾಗಿ, ನಮಸ್ಕಾರಮಾಡುತ್ತಾ ನಿನ್ನ ಸಮೀಪಕ್ಕೆ ಬರುವೆವು. (ಏಳನೇ ಋಕ್ಕು)

ತೇಜಸ್ವಿಯಾಗಿರುವ, ಹಿಂಸಾರಹಿತ ಯಜ್ಞಗಳ ರಕ್ಷಕನಾದ, ಕರ್ಮಫಲ ನೀಡುವವನಾದ, ಯಜ್ಞಶಾಲೆಯಲ್ಲಿ ವರ್ಥಿಸುವ (ನಿನ್ನ ಸಮೀಪಕ್ಕೆ ಬರುವೆವು) (ಎಂಟನೇ ಋಕ್ಕು)

ಅಗ್ನಿಯೇ, ಮಗನಿಗೆ ತಂದೆಯಂತೆ ನಮಗೆ ಸುಲಭವಾಗಿ ದೊರಕು.  ನಮಗೆ ಮಂಗಳವುಂಟು ಮಾಡುವುದಕ್ಕೆ ನಮ್ಮ ಜೊತೆಯಲ್ಲಿರು. (ಒಂಬತ್ತನೇ ಋಕ್ಕು)

No comments:

Post a Comment