Saturday, 13 August 2022

Sri Dhali Lakshminarasimha Bhatta - Veda Vandane:2022

 ಋಗ್ವೇದ ಬ್ರಹ್ಮ ಶ್ರೀ ಧಾಳಿ ಲಕ್ಷ್ಮಿ ನರಸಿಂಹ ಭಟ್ಟ

ವೇದ ಶಿಕ್ಷಣ ಸಮಿತಿಯ ವತಿಯಿಂದ ದಿನಾಂಕ 6ನೇ ಆಗಸ್ಟ್ 2022, ಶನಿವಾರದಂದು ವೇದ ಬ್ರಹ್ಮ ಶ್ರೀ ಧಾಳಿ ಲಕ್ಷ್ಮಿ ನರಸಿಂಹ ಭಟ್ಟ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಾಯಿತು.  ವೇದ ಶಿಕ್ಷಣ ಸಮಿತಿಯು ವೇದ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ಮಹನೀಯರಿಗೆ ಕೃತಜ್ಞತೆ ಅರ್ಪಿಸುವ  ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಈ ಭೇಟಿ ಯೋಜನೆಯಾಗಿತ್ತು.  ಭೇಟಿಯ ಸಂದರ್ಭದಲ್ಲಿ ವೇದ ಬ್ರಹ್ಮ ಶ್ರೀ ಧಾಳಿ ಲಕ್ಷ್ಮಿ ನರಸಿಂಹ ಭಟ್ಟರ ವೇದಾಧ್ಯಯನ, ಅಧ್ಯಾಪನ ಮತ್ತು ಶಿಸ್ತು-ಸಮರ್ಪಿತ ಜೀವನದ ಬಗ್ಗೆ ಶಿಕ್ಷಣ ಸಮಿತಿಯ ಸದಸ್ಯರು ತಿಳಿದುಕೊಂಡರು. 

ಶ್ರೀ ಧಾಳಿ ಲಕ್ಷ್ಮಿ ನರಸಿಂಹ ಭಟ್ಟರು ವೇದ ಬ್ರಹ್ಮ ಶ್ರೀ. ಧಾಳಿ ಭೀಮ ಭಟ್ಟರು ಮತ್ತು ಶ್ರೀಮತಿ. ಪಾರ್ವತಮ್ಮ ಅವರ ಏಕೈಕ ಸುಪುತ್ರರು.  27ನೇ ಮೇ 1927 ರಂದು ಜನನ.  ಇವರ ತಂದೆ ಮೈಸೂರು ಅರಮನೆಯಲ್ಲಿ ಧರ್ಮಾಧಿಕಾರಿಗಳಾಗಿದ್ದವರು.  ಇವರು ಗೌರಿಬಿದನೂರು ಬಳಿಯ ಧಾಳವಟ್ಟದವರು.  ಇವರ ಕುಟುಂಬದಲ್ಲಿ ವೇದ ಪುರುಷನು ನೆಲೆಸಿದ್ದು ಹಿಂದಿನಿಂದಲೂ ಋಗ್ವೇದದ ಶಕಲ ಶಾಖೆಯನ್ನು ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ ಕಲಿಸುತ್ತಾ ಬಂದಿದ್ದಾರೆ.  ಈ ಪರಂಪರೆಯಲ್ಲಿ ಶ್ರೀ ಧಾಳಿ ಲಕ್ಷ್ಮಿ ನರಸಿಂಹ ಭಟ್ಟರು 46ನೇ ತಲೆಮಾರಿನವರು.   ಹದಿನೈದು ವರ್ಷಗಳ ವೇದಾಧ್ಯಯನವನ್ನು ಮಾಡಿರುವ ಶ್ರೀ ಲಕ್ಷ್ಮಿ ನರಸಿಂಹ ಭಟ್ಟರು ಅಶ್ವಲಾಯನ ಸೂತ್ರದ ಶ್ರೌತ, ಸ್ಮಾರ್ತ ಪ್ರಯೋಗಗಳಿಗೆ ಗ್ರಂಥ ರಚಿಸಿದ್ದಾರೆ.  ಯುಜುರ್ ಸಂಹಿತಾ ಅಧ್ಯಯನ ಮಾಡಿದ್ದಾರೆ. ಶಕಲ ಶಾಖೆಯನ್ನು ಸಲಕ್ಷಣ ಘನಾಂತದವರೆಗೆ ಕಲಿತಿದ್ದಾರೆ.  ಹಲವಾರು ವಿಕೃತಿ ಪಾಠಗಳೂ, ಷಡಂಗಗಳೂ,  ಮತ್ತು ಫಲ ಜ್ಯೌತಿಷದ ಅಧ್ಯಯನವನ್ನೂ ಮಾಡಿದ್ದಾರೆ.  

ಬಾಲ್ಯದಲ್ಲಿ 11ನೇ ವಯಸ್ಸಿನಲ್ಲಿ ಉಪನಯನ ಆದ ನಂತರದಲ್ಲಿ ತಂದೆ ಭೀಮ ಭಟ್ಟರಿಂದ ಪ್ರಾತಃ 7ಘಂಟೆಗೆ ಅರಮನೆಗೆ ಹೋಗುವ ಮುನ್ನ ಮಗನಿಗೆ ಪಾಠ ನಡೆಯುತ್ತಿತ್ತು.  ನಂತರ ಲಕ್ಷ್ಮಿ ನರಸಿಂಹ ಭಟ್ಟರು ತಾಯಿಯ ಉಪಸ್ಥಿತಿಯಲ್ಲಿ ಪಾಠದ ಆವರ್ತನೆ ಮಾಡಿಕೊಳ್ಳುತ್ತಿದ್ದರು.  ಸ್ವರ ತಪ್ಪುತ್ತಿದ್ದ ಭಾಗಗಳನ್ನು ಗುರುತಿಸುತ್ತಿದ್ದ ತಾಯಿ ಪಾರ್ವತಮ್ಮನವರು ಮಗನನ್ನು ಎಚ್ಚರಿಸುತ್ತಿದ್ದರು ಮತ್ತು ಮನೆಗೆ ಬಂದ ನಂತರ ಭೀಮಭಟ್ಟರಿಗೆ ತಿಳಿಸುತ್ತಿದ್ದರು.  

ಅಧ್ಯಯನದ ನಂತರದಲ್ಲಿ ಇವರು ಬೆಂಗಳೂರಿನ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಋಗ್ವೇದದ ಪ್ರಾಧ್ಯಾಪಕರಾಗಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.  ಸ್ವಾತಂತ್ರ್ಯಾನಂತರದಲ್ಲಿ ಆದ ಸ್ಥಿತ್ಯಂತರಗಳಲ್ಲಿ ಪಾಠಶಾಲೆಯಲ್ಲಿ ಸಂಪ್ರದಾಯದ ಆಚರಣೆ ಸಾಧ್ಯವಾಗದಿದ್ದಾಗ ಸರ್ಕಾರೀ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಬದ್ಧತೆಯನ್ನು ಉಳಿಸಿಕೊಂಡವರು.  

ಸುಮಾರು 15ಕ್ಕೂ ಹೆಚ್ಚು ಗ್ರಂಥಗಳನ್ನು ಶ್ರೀಯುತರು ರಚಿಸಿದ್ದಾರೆ. ಇವುಗಳಲ್ಲಿ ಮಂತ್ರಗಳನ್ನು ದೇವನಾಗರೀ ಲಿಪಿಯಿಂದ ಕನ್ನಡ ಲಿಪಿಗೆ ತಂದಿರುವ ಶ್ರೀ. ರಾಮಕೃಷ್ಣ ಮಠದವರು ಪ್ರಕಾಶಿಸಿರುವ ಋಗ್ವೇದ ಸಂಹಿತಾ ಗ್ರಂಥವೂ ಒಳಗೊಂಡಂತೆ,  ಇನ್ನೂ ಹಲವಾರು ಅಧಿಕೃತ ಆಧ್ಯಾತ್ಮಿಕ ಸಾಹಿತ್ಯ ಸೇರಿದೆ. 

ಶ್ರೀಯುತರು ತಮ್ಮ ಕುಟುಂಬದ ವೇದ ಪರಂಪರೆಯನ್ನು ಮುಂದುವರೆಸಿದ್ದು ತಮ್ಮ ಮೂವರು ಪುತ್ರರಿಗೂ ಮತ್ತು ತಮ್ಮ ಮೊಮ್ಮಗನಿಗೂ ವೇದ ಅಧ್ಯಾಪನವನ್ನೂ ಮಾಡಿದ್ದಾರೆ.  ನೂರಾರು ವಿದ್ಯಾರ್ಥಿಗಳಿಗೆ ವೇದ ವಿದ್ಯೆಯನ್ನು ನೀಡಿರುವ ಶ್ರೀ ಧಾಳಿ ಲಕ್ಷ್ಮಿ ನರಸಿಂಹ ಭಟ್ಟರು ಬೆಂಗಳೂರಿನ ಶಂಕರ ಮಠ, ಮಾಗಡಿ ಕರಣೀಕರ ಪಾಠಶಾಲೆ, ಮತ್ತು ವಿದ್ಯಾಪೀಠ ವೇದ ವಿದ್ಯಾಲಯಗಳಲ್ಲಿ ಅಧ್ಯಾಪನ ಮಾಡಿದ್ದಾರೆ.  ಪ್ರತಿದಿನವೂ ಈ ಮೂರೂ ಪಾಠಶಾಲೆಗಳಿಗೆ ನಡೆದೇ ಹೋಗುತ್ತಿದ್ದ  ಶ್ರೀ ಧಾಳಿ ಲಕ್ಷ್ಮಿ ನರಸಿಂಹ ಭಟ್ಟರು ಆಚಾರವಂತರು, ಪರಿಶ್ರಮದ ಜೀವನ ನಡೆಸಿದವರು, ಇಳಿವಯಸ್ಸಿನಲ್ಲೂ ವಿಶ್ರಾಂತಿರಹಿತವಾಗಿ  ಪಾರಾಯಣ ನಡೆಸುತ್ತಿರುವವರು. ಸನಾತನ ಧರ್ಮದ ನೈಜ ಪ್ರತಿನಿಧಿಗಳು.

No comments:

Post a Comment