Saturday, 1 October 2022

ಶ್ರೀ ದುರ್ಗಾ ಸಪ್ತಶತೀ ಅಥವಾ ದೇವೀ ಮಹಾತ್ಮೆ

 ಮಾರ್ಕಂಡೇಯ ಪುರಾಣದ ೭೮ನೇ ಅಧ್ಯಾಯದಿಂದ ೯೦ ಅಧ್ಯಾಯದವರೆಗಿನ ಹದಿಮೂರು ಅಧ್ಯಾಯಗಳ ಭಾಗವೇ ದೇವೀ ಸಪ್ತಶತೀ. ದೇವೀ ಮಹಾತ್ಮೆ ಎಂದೂ ಕರೆಯುವರು.   ಮಾರ್ಕಂಡೇಯ ಪುರಾಣದಲ್ಲಿ ಒಟ್ಟು ೧೩೪ ಅಧ್ಯಾಯಗಳಿವೆ. 

ಅಧ್ಯಾಯ ೧

ಸೂರ್ಯ ಪುತ್ರನಾದ ಸಾವರ್ಣಿಯು ಎಂಟನೆಯ ಮನುವು. ಅವನ ವೃತ್ತಾಂತವು ಇಲ್ಲಿದೆ.   ಸ್ವಾರೋಚಿಷ ಮನ್ವಂತರದಲ್ಲಿದ್ದ ಚೈತ್ರನೆಂಬ ರಾಜವಂಶದಲ್ಲಿ ಜನಿಸಿದ್ದ ಸುರಥನು ಭೂಮಂಡಲವನ್ನು ಆಳುತ್ತಿದ್ದನು.  ಆಗ ಅವನಿಗೆ ಶತ್ರುಗಳಾಗಿ ವರ್ಣವಿಧ್ವಂಸಕರಾದ ರಾಕ್ಷಸ ಯೋನಿಯ ರಾಜರು ಎದುರಾದರು.  ಸುರಥನು ಸೋತು ಸಮಸ್ತವನ್ನೂ ಕಳೆದುಕೊಂಡು ವನವನ್ನು ಸೇರಿ ಸುಮೇಧ ಎಂಬ ಋಷಿಯ ಆಶ್ರಮದ ಬಳಿ ಹೋದನು.

ಆಶ್ರಮದ ಬಳಿ ವಾಸ ಮಾಡುತ್ತಾ ತನ್ನ ಕಳೆದ ರಾಜ್ಯದ ಬಗ್ಗೆ ಚಿಂತಿಸುತ್ತಿರಲು ಸಮಾಧಿ ಎಂಬ ಹೆಸರಿನ ವೈಶ್ಯನನ್ನು ಭೇಟಿಯಾದನು.  ಆ ವೈಶ್ಯನು ಪತ್ನೀ-ಬಂಧುಗಳಿಂದ ತ್ಯಜಿಸಲ್ಪಟ್ಟು ಎಲ್ಲಾ ಧನವನ್ನೂ ಕಳೆದುಕೊಂಡು ಅದೇ ಕಾಡಿಗೆ ಬಂದು ಚಿಂತಿಸುತ್ತಾ, ತನ್ನವರ ಯೋಗಕ್ಷೇಮದ ಬಗ್ಗೆ ಯೋಚಿಸುತ್ತಾ ಕಾಲ ಕಳೆಯುತ್ತಿದ್ದನು. 

ಅವರಿಬ್ಬರೂ ಸುಮೇಧನ ಬಳಿ ಹೋಗಿ ಜ್ಞಾನವಂತರೂ ಮಮತೆಯಿಂದ ವಿವೇಕವನ್ನು ಕಳೆದುಕೊಂಡು ಮೂಢರಾಗುವ ಕಾರಣವನ್ನು ಕೇಳಿದರು.

ಭೋಗ್ಯವಿಷಯಗಳಲ್ಲಿ ಮನುಷ್ಯರೂ  - ಪ್ರಾಣಿ - ಪಕ್ಷಿಗಳೂ ಜ್ಞಾನಸಂಪನ್ನವಾಗಿವೆಯೆಂದೂ, ಮಾನವರು ಮಾತ್ರ ಶಾಸ್ತ್ರ ಅಭ್ಯಾಸದಿಂದ ವಿವೇಕವನ್ನು ಹೊಂದಿದ್ದಾರೆಂದೂ ಋಷಿಯು ಅವರಿಗೆ ತಿಳಿಸಿದನು.  ಆದರೂ ಮಹಾಮಾಯೆಯ ಪ್ರಭಾವದಿಂದ ಮೋಹಕ್ಕೊಳಗಾಗಿ ಸಂಸಾರ ಸ್ಥಿತಿಯಲ್ಲಿ ಮಾನವರು ಇದ್ದಾರೆ.  ಮಹಾಮಾಯೆಯು ವಿಷ್ಣುವಿನ ಯೋಗನಿದ್ರೆ. ಅದರಿಂದ ಎಲ್ಲಾ ಜಗತ್ತು ಮೋಹಗೊಳಿಸಲ್ಪಟ್ಟಿದೆ.

ಮಹಾಮಾಯೆಯು ನಿತ್ಯಳು.  ದೇವತೆಗಳ ಕಾರ್ಯವನ್ನುವನ್ನು ಮಾಡಲು ಅವಳು ಉತ್ಪನ್ನಳಾಗುವಳು. ವಿಷ್ಣುವು ಕಲ್ಪದ ಅವಸಾನದಲ್ಲಿ ಪ್ರಪಂಚವು ಜಲಮಯವಾಗಿರಲು, ಆದಿಶೇಷನ ಮೇಲೆ ಮಲಗಿ ಯೋಗನಿದ್ರೆಯನ್ನು ಹೊಂದಿದನು.  ಆಗ ಮಧು ಕೈಟಭರೆಂಬ ಇಬ್ಬರು ಘೋರ ಅಸುರರು ವಿಷ್ಣುವಿನ ಕಿವಿಯ ಕಶ್ಮಲದಿಂದ ಹುಟ್ಟಿ ನಾಭಿಯಲ್ಲಿದ್ದ ಬ್ರಹ್ಮನನ್ನು ಹತ್ಯೆ ಮಾಡಲು ಉದ್ಯುಕ್ತರಾದರು.  ಆಗ ಬ್ರಹ್ಮನು ಯೋಗಮಾಯೆಯನ್ನು ಸ್ತುತಿಸಿ ವಿಷ್ಣುವನ್ನು ಎಚ್ಚರಗೊಳಿಸಿ, ಮಧುಕೈಭಟರನ್ನು ವಧಿಸಲು ಸಹಕರಿಸಲು ಕೋರಿದನು.  ಮಹಾಮಾಯೆಯು ವಿಷ್ಣುವಿನಿಂದ ಹೊರಬಂದು ವ್ಯಕ್ತಳಾದಳು. ವಿಷ್ಣುವು ಎಚ್ಚರಗೊಂಡು ಅಸುರರೊಡನೆ ಐದು ಸಾವಿರ ವರ್ಷ ಸೆಣಸಿದನು. ಆದರೂ ಯುದ್ಧ ಮುಗಿಯಲಿಲ್ಲ. ಆಗ ಮಹಾಮಾಯೆಯು ಅವರನ್ನು ಸಂಮೋಹಿಸಿದಾಗ ಅಸುರರು ವಿಷ್ಣುವಿಗೆ ವರವೊಂದನ್ನು ನೀಡುವುದಾಗಿ ಹೇಳಿದರು. ವಿಷ್ಣುವು ಅವರ ವಧೆಯನ್ನು ಕೇಳಿದನು.  ಜಗತ್ತೆಲ್ಲವೂ ನೀರಿನಿಂದ ಆವೃತ್ತನಾಗಿರುವುದನ್ನು ಗಮನಿಸಿದ ಅಸುರರು, ನೀರಿಲ್ಲದ ಜಾಗದಲ್ಲಿ ವಧಿಸಲು ವಿಷ್ಣುವಿಗೆ ಹೇಳಿದರು. ವಿಷ್ಣುವು ಅವರನ್ನು ತನ್ನ ಜಘನದಲ್ಲಿ ಇರಿಸಿಕೊಂಡು ಅವರ ಶಿರಗಳನ್ನು ಕತ್ತರಿಸಿದನು.

 

ಅಧ್ಯಾಯ ೨

ಹಿಂದೆ ಒಂದು ಕಲ್ಪದಲ್ಲಿ ಮಹಿಷಾಸುರನು ಅಸುರರಿಗೆ ರಾಜನಾಗಿದ್ದಾಗ ದೇವತೆಗಳ ಜೊತೆ ಒಂದು ನೂರು ವರ್ಷ ಯುದ್ದಮಾಡಿ ಮಹಿಷಾಸುರನು ಗೆದ್ದು ಇಂದ್ರ ಪದವಿಗೆ ಏರಿದನು. ಸೋತ ದೇವತೆಗಳು ತಮ್ಮ ಕಷ್ಟವನ್ನು ತ್ರಿಮೂರ್ತಿಗಳ ಬಳಿ ಹೇಳಿಕೊಂಡರು.  ಆಗ ಕೋಪಗೊಂಡ ತ್ರಿಮೂರ್ತಿಗಳ ಮುಖದಿಂದ ಬಂದ ತೇಜಸ್ಸು ಒಟ್ಟಾಗಿ ನಾರೀ ರೂಪವನ್ನು ಪಡೆಯಿತು.  ನಂತರ ಇತರ ದೇವತೆಗಳ ತೇಜಸ್ಸನ್ನೂ ಆಯುಧಗಳನ್ನೂ ಪಡೆದ ಆ ನಾರೀ ರೂಪವು ಸಿಂಹವನ್ನು ವಾಹನವನ್ನು ಮಾಡಿಕೊಂಡ ದೇವಿಯು.   ಸರ್ವಶಕ್ತೆಯಾದ ದೇವಿಯು ಮಾಡಿದ ಗರ್ಜನೆಗೆ ಪ್ರತಿಯಾಗಿ ಮಹಿಷಾಸುರನೂ ಅವನ ಅಸುರ ಸೈನ್ಯವೂ ಅವಳೊಡನೆ ಯುದ್ಧಕ್ಕೆ ನಿಂತರು. 

ಚಿಕ್ಷುರ, ಚಾಮರ, ಉದಗ್ರ, ಮಹಾಹನು, ಅಸಿಲೋಮ, ಬಾಷ್ಕಲ, ಉಗ್ರದರ್ಶನ, ಬಿಡಾಲ, ಕಾಲ ಎಂಬ ಅಸುರರು ತಮ್ಮ ಕೋಟಿ-ಕೋಟಿ ಸೈನ್ಯದೊಡನೆ ಯುದ್ಧಮಾಡಿದರು.  ಚಂಡಿಕಾ ದೇವಿಯು ಅವರ ಸೈನ್ಯವೆಲ್ಲವನ್ನೂ ಹತಮಾಡಿದಳು.  ದೇವಿಯ ವಾಹನವಾದ ಸಿಂಹವೂ ಕೂಡ ಘೋರವಾದ ಯುದ್ಧದಲ್ಲಿ ಭಾಗವಹಿಸಿತು.  ದೇವತೆಗಳು ಆಕಾಶದಿಂದ ಪುಷ್ಪ ವೃಷ್ಟಿಯನ್ನು ಸುರಿಸಿ ತೃಪ್ತಿಯಿಂದ ಸ್ತುತಿಸಿದರು.

 

ಅಧ್ಯಾಯ ೩

ದೇವಿಯು ಚಿಕ್ಷುರ, ಚಾಮರ, ಉದಗ್ರ, ಕರಾಲ, ಉದ್ಧತ, ಭಾಷ್ಕಲ, ತಾಮ್ರ-ಅಂಧಕ, ಉಗ್ರಾಸ್ಯ, ಉಗ್ರವೀರ್ಯ ಮತ್ತು ಮಹಾಹನು, ಬಿಡಾಲ, ದುರ್ಧರ-ದುರ್ಮುಖ, ಕಾಲ, ಉಗ್ರದರ್ಶನ, ಅಸಿಲೋಮ - ಇವರನ್ನು ಕೊಂದಳು.  ಮಹಿಷಾಸುರನು ಮಹಿಷರೂಪದಿಂದ ದೇವಿಯ ಪರಿವಾರದಲ್ಲಿದ್ದ ಶಕ್ತಿಗಣವನ್ನು ಬೆದರಿಸಿದನು.  ಚಂಡಿಕಾದೇವಿಯ ವಾಹನವಾದ ಸಿಂಹವನ್ನು ಕೊಲ್ಲಲು ಬಂದನು. ಕೋಪಗೊಂಡ ಚಂಡಿಕಾದೇವಿಯು ಪಾಶವನ್ನು ಬೀಸಿ ಅವನನ್ನು ಬಂಧಿಸಿದಳು.  ಮಹಿಷಾರೂಪವನ್ನು ಬಿಟ್ಟ ಅಸುರನು ಸಿಂಹರೂಪವನ್ನು ತಾಳಿದನು.  ಚಂಡಿಕೆಯು ಅದರ ಶಿರವನ್ನು ಛೇಧಿಸುವಷ್ಟರಲ್ಲಿ ಅಸುರನು ಮನುಷ್ಯರೂಪವನ್ನು ತಾಳಿದನು.  ನಂತರ ಆನೆಯ ರೂಪವನ್ನೂ ಮತ್ತು ಪುನಃ ಮಹಿಷರೂಪವನ್ನೂ ತಾಳಿದ ಅಸುರನನ್ನು ಮಧುಪಾನ ಮಾಡಿದ ಚಂಡಿಕೆಯು ತುಳಿದು ಶೂಲಾಯುಧದಿಂದ ಚುಚ್ಚಿ ಕತ್ತಿಯಿಂದ ಕತ್ತರಿಸಿ ವಧಿಸಿದಳು. 

 

ಅಧ್ಯಾಯ ೪

ದೇವತೆಗಳು ಚಂಡಿಕಾದೇವಿಯನ್ನು ಸ್ತುತಿಸಿದರು.  ಶಾಂತವಾಗಲು ಪ್ರಾರ್ಥಿಸಿದರು. ಸುಪ್ರೀತವಾದ ದೇವಿಯು ದೇವತೆಗಳಿಗೆ ವರವನ್ನು ನೀಡಿದಳು.  ಆಗ ದೇವತೆಗಳು ತಮಗೆ ಕಷ್ಟಬಂದಾಗ  ಬಂದು ಅದನ್ನು ಪರಿಹರಿಸಲು ಕೇಳಿಕೊಂಡರು.  ಹಾಗೆಯೇ ಆಗಲಿ ಎಂದ ದೇವಿಯು (ಭದ್ರಕಾಳಿಯು) ಅದೃಶ್ಯಳಾದಳು.

 

ಅಧ್ಯಾಯ ೫

ಹಿಂದೆ ಒಂದು ಕಲ್ಪದಲ್ಲಿ ಶುಂಭ-ನಿಶುಂಭ ಎಂಬ ಅಸುರರು ದೇವೇಂದ್ರನನ್ನು ಸೋಲಿಸಿ ತ್ರೈಲೋಕ್ಯಾಧಿಕಾರ ಸಂಪಾದಿಸಿದ್ದರು. ಆಗ ದೇವತೆಗಳು ದೇವಿಯನ್ನು ಸ್ಮರಿಸಿಕೊಂಡು ವಿಧವಿಧವಾಗಿ ಸ್ತುತಿಸಿದರು.  ವಿಷ್ಣುಮಾಯೆ, ಚೇತನ, ಬುದ್ಧಿ, ನಿದ್ರಾ, ಕ್ಷುಧಾ, ಛಾಯಾ, ಶಕ್ತಿ, ತೃಷ್ಣಾ, ಕ್ಷಾಂತಿ, ಜಾತಿ, ಲಜ್ಜಾ, ಶಾಂತಿ, ಶ್ರದ್ಧಾ, ಕಾಂತಿ, ಲಕ್ಷ್ಮೀ, ಧೃತಿ, ವೃತ್ತಿ, ಸ್ಮೃತಿ, ದಯಾ, ನೀತಿ, ತುಷ್ಟಿ,  ಪುಷ್ಟಿ, ಮಾತೃ, ಭ್ರಾಂತಿ ರೂಪಗಳಿಂದ ಎಲ್ಲಾ ಭೂತಗಳಲ್ಲಿಯೂ ಇರುವ ದೇವಿಯನ್ನು ಅವರು ನಮಿಸಿದರು.  (ಇದಕ್ಕೆ ಅಪರಾಜಿತಾ ಸ್ತೋತ್ರ ಎಂದು ಹೆಸರು). ಆಗ  ಪಾರ್ವತಿಯು ಜಾಹ್ನವೀನದಿಯಲ್ಲಿ ಸ್ನಾನ ಮಾಡಲು ಬಂದಳು.  ಆಗ ದೇವಿಯು ಪಾರ್ವತಿಯ ದೇಹದಿಂದ ಉದ್ಭವಿಸಿ ಕೌಶಿಕೀ ಎಂದು ಕರೆಯಲ್ಪಟ್ಟಳು.  ಆಗ ಪಾರ್ವತಿಯ ದೇಹವು ಕಪ್ಪಾಗಿ ಕಾಳಿಕಾ ಎಂದು ಕರೆಯಲ್ಪಟ್ಟಳು.  ಪಾರ್ವತಿಯಿಂದ ಹೊರಬಂದ ಅಂಬಿಕೆಯು ರಮಣೀಯವಾದ ರೂಪವನ್ನು ಧರಿಸಿದಳು. ಅದನ್ನು ನೋಡಿದ ಚಂಡ -ಮುಂಡರೆಂಬ ಭೃತ್ಯರು ಅಂಬಿಕೆಯ ರೂಪವನ್ನು ಶುಂಭ-ನಿಶುಂಭರಿಗೆ ನಿವೇದಿಸಿದರು. ಅವಳನ್ನು ವಶಮಾಡಿಕೊಳ್ಳಲು ಉದ್ಯುಕ್ತರಾದ ಅಸುರರು ದೇವಿಯ ಬಳಿ ಸುಗ್ರೀವನೆಂಬ ದೂತನನ್ನು ಕಳುಹಿಸಿದನು.  ಸುಗ್ರೀವನು ದೇವಿಯ ಬಳಿಹೋಗಿ ಶುಂಭನ ರಾಣಿಯಾಗಲು ಹೇಳಿದನು. ನಗುಮುಖದ ದೇವಿಯು ತಾನು ವಿವಾಹದ ವಿಚಾರದಲ್ಲಿ ಪ್ರತಿಜ್ಞೆಯನ್ನು ಮಾಡಿರುವುದಾಗಿಯೂ, ಮತ್ತು ಅದರಂತೆ ಯಾರು ತನ್ನನ್ನು ಸೋಲಿಸುತ್ತಾನೋ ಅವನನ್ನು ವರಿಸುವುದಾಗಿಯೂ ಹೇಳಿದಳು.

 

ಅಧ್ಯಾಯ ೬

ಕೋಪಗೊಂಡ ಸುಗ್ರೀವನ ವರದಿಯನ್ನು ಕೇಳಿ ಶುಂಭನು ಕೋಪಗೊಂಡನು.  ಧೂಮ್ರಲೋಚನನೆಂಬ ಅಸುರನನ್ನು  ದೇವಿಯ ಮುಡಿಯನ್ನು ಎಳೆದು ತರಲು ಕಳುಹಿಸಿದನು.  ಅರವತ್ತು ಸಹಸ್ತ್ರ ಸಂಖ್ಯೆಯ ಸೈನ್ಯದೊಡನೆ ಹೋದ ಧೂಮ್ರಲೋಚನನ್ನು ಸುಟ್ಟು ಅವನ ಸೈನ್ಯವನ್ನು ಸಿಂಹದ ಜೊತೆಗೂಡಿ ನಾಶಮಾಡಿದಳು.  ಈ ವಿಚಾರವನ್ನು ತಿಳಿದ ಶುಂಭನು ಚಂಡ-ಮುಂಡರನ್ನು ದೇವಿಯನ್ನು ತರಲು ಕಳುಹಿಸಿದನು.

 

ಅಧ್ಯಾಯ ೭

ಚಂಡ ಮುಂಡರನ್ನು ನೋಡಿದ ದೇವಿಯು ಕೋಪಗೊಂಡಳು. ಅವಳ ಹಣೆಯಿಂದ ಕಾಳೀದೇವಿಯು ಅವಿರ್ಭವಿಸಿದಳು.  ಅವಳು ವ್ಯಾಘ್ರ ಚರ್ಮವನ್ನು ಧರಿಸಿ, ಖಟ್ವಾಂಗವನ್ನು ಹಿಡಿದು, ನರರ ಮುಂಡಮಾಲೆಯನ್ನು ಧರಿಸಿದ್ದಳು.

ಅಸುರಸೈನ್ಯವನ್ನು ವಧಿಸುತ್ತಾ ಭಕ್ಷಿಸುತ್ತಿದ್ದಳು.  ದೇವಿಯ ಮೇಲೆ ಎರಗಿದ ಚಂಡನ ಜುಟ್ಟನ್ನು ಹಿಡಿದ ಕಾಳಿಯು ಅವನ ಶಿರಚ್ಛೇದವನ್ನು ಮಾಡುತ್ತಾಳೆ.  ನಂತರ ಬಂದ ಮುಂಡನನ್ನು ಖಟ್ವಾಂಗದಿಂದ ಅವನನ್ನು ಹೊಡೆದು ಕೊಲ್ಲುತ್ತಾಳೆ. ಅವರ ಮುಂಡಗಳನ್ನು ಹಿಡಿದುಕೊಂಡು ಚಂಡಿಕಾಂಬಿಕೆಗೆ ಒಪ್ಪಿಸಿ ಶುಂಭನಿಶುಂಭರನ್ನು ವಧಿಸಲು ಕೇಳಿಕೊಳ್ಳುತ್ತಾಳೆ.

 

ಅಧ್ಯಾಯ ೮

ಕೋಪಗೊಂಡ ಶುಂಭಾಸುರನು ಹಲವಾರು ರಾಕ್ಷಸರನ್ನು ಯುದ್ಧಕ್ಕೆ ಕಳುಹಿಸಿದನು.  ಚಂಡಿಕಾದೇವಿಯು ಬಿಲ್ಲನ್ನು ಹೆದೆಯೇರಿಸಿದಳು. ದೇವಿಯ ವಾಹನವಾದ ಸಿಂಹವೂ ಕೂಡ ಗಟ್ಟಿಯಾಗಿ ಘರ್ಜಿಸಿತು.  ರೊಚ್ಚಿಗೆದ್ದ ದೈತ್ಯಸೈನ್ಯವು ದೇವಿ, ಸಿಂಹ ಮತ್ತು ಕಾಳಿಯರನ್ನು ಬಾಣಗಳಿಂದ ಆವರಿಸಿದರು. ಆಗ ಎಲ್ಲಾ ಶಕ್ತಿದೇವತೆಗಳೂ ಸಹ ಅಲ್ಲಿ ಒಟ್ಟಾಗಿ ಸೇರಿದರು.   ಆ ದೇವತೆಗಳ ಶಕ್ತಿಗಳು ಪ್ರತ್ಯೇಕವಾಗಿ ಚಂಡಿಕಾಂಬಿಕೆಯ ಬಳಿ ಸೇರಿದರು. ಬ್ರಹ್ಮಾಣಿ, ಮಾಹೇಶ್ವರಿ,  ಕೌಮಾರೀ, ವೈಷ್ಣವೀ, ವಾರಾಹೀ, ನಾರಸಿಂಹೀ, ಐಂದ್ರೀ ಇವರಿಂದ ಆವರಿಸಲ್ಪಟ್ಟ ದೇವಿಯ ದೇಹದಿಂದ ಚಂಡಿಕೆಯು ಪ್ರತ್ಯೇಕಳಾದಳು.  ಚಂಡಿಕೆಯು ರುದ್ರನನ್ನು ದಾನವರ ಬಳಿ ತನ್ನ ದೂತನನ್ನಾಗಿ ಕಳಿಸಿದಳು.  ಆದ್ದರಿಂದ ಅವಳನ್ನು ಶಿವದೂತಿ ಎಂದು ಕರೆಯಲಾಗುತ್ತದೆ.   ದೇವಿಯ ಸಂದೇಶವಾಣಿಯನ್ನು ಒಪ್ಪದ ಅಸುರರು ಮಾಡಿದ ಯುದ್ಧವನ್ನು  ಚಂಡಿಕೆಯು ಮುಂದೆ ಕಾಳಿನಿಂತು ಇಬ್ಬರೂ ಶತ್ರುವನ್ನು ಎದುರಿಸಿದರು.  ಇತರ ಶಕ್ತಿದೇವತೆಗಳು ಕಮಂಡಲ ಜಲ, ತ್ರಿಶೂಲ, ಚಕ್ರಾಯುಧ, ಶಕ್ತ್ಯಾಯುಧ, ವಜ್ರಾಯುಧ, ಮೂತಿಯಿಂದಲೂ, ಹಲ್ಲುಗಳಿಂದಲೂ, ಚಕ್ರಾಯುಧದಿಂದಲೂ, ಉಗುರುಗಳಿಂದಲೂ, ಅಸುರರನ್ನು ಸಂಹರಿಸಿದರು.  ಈ ರೀತಿ ಮಾತೃಗಣದಿಂದ ಸೋತ ಅಸುರರ ಪರವಾಗಿ ರಕ್ತಬೀಜಾಸುರನು ಮುಂದೆ ಬಂದನು.

ರಕ್ತಬೀಜಾಸುರನ ದೇಹದಿಂದ ಬೀಳುವ ರಕ್ತದ ತೊಟ್ಟುಗಳಿಂದ ಮತ್ತೊಬ್ಬ ರಾಕ್ಷಸನು ಹುಟ್ಟಿಕೊಳ್ಳುವನು.  ಅವನು ಐಂದ್ರೀ ದೇವಿಯೊಡನೆ ಯುದ್ಧಮಾಡಿದನು. ವಜ್ರಾಯುಧದ ಆಘಾತದಿಂದ ರಕ್ತಬೀಜನ ದೇಹದಿಂದ ಸುರಿದ ರಕ್ತದಿಂದ ಅನೇಕ ರಾಕ್ಷಸರು ಜನಿಸಿದರು. ಅದೇರೀತಿ ಚಕ್ರಾಯುಧದಿಂದ ಘಾಸಿಗೊಂಡ ರಕ್ತಬೀಜಾಸುರನ ದೇಹದಿಂದ ಬಿದ್ಧ ರಕ್ತದಿಂದ ಸಹಸ್ರಾರು ರಾಕ್ಷಸರು ಹುಟ್ಟಿಕೊಂಡರು.  ಹಾಗೆಯೇ ಮಾತೃಗಣದೇವತೆಗಳಿಂದ ಗಾಯಗೊಂಡ ರಕ್ತಬೀಜಾಸುರನ ದೇಹದಿಂದ ರಕ್ತ ಚಿಮ್ಮಿತು. ಆಗ ಚಂಡಿಕೆಯು ಕಾಳಿಗೆ - ಚಾಮುಂಡಿಯೇ ನಿನ್ನ ಮುಖವನ್ನು ತೆಗೆ ಮತ್ತು ರಕ್ತಬೀಜಾಸುರನ ದೇಹದಿಂದ ಬೀಳುವ ರಕ್ತವನ್ನು ನುಂಗು ಎಂದು ಹೇಳಿದಳು.  ನಂತರ ಚಂಡಿಕೆಯು ಶೂಲದಿಂದ ರಕ್ತಬೀಜಾಸುರನನ್ನು ಘಾತಗೊಳಿಸುತ್ತಿರಲು, ಚಾಮುಂಡಿಯು ಅವನ ದೇಹದಿಂದ ಬರುತ್ತಿರುವ ರಕ್ತವನ್ನು ಪಾನಮಾಡಿದಳು.  ಆ ರಕ್ತದಿಂದ ಜನಿಸಿದ ರಾಕ್ಷಸರನ್ನು ಕಾಳಿಯು ಭಕ್ಷಿಸಿದಳು. ಈ ರೀತಿ ರಕ್ತಬೀಜಾಸುರನು ವಧಿಸಲ್ಪಟ್ಟನು.

 

ಅಧ್ಯಾಯ ೯

ತನ್ನ ಸೈನ್ಯ ನಾಶವಾದದ್ದನ್ನು ನೋಡಿದ ನಿಶುಂಭನು ಚಂಡಿಕೆಯ ಮೇಲೆ ಯುದ್ಧಮಾಡಿದನು.  ಅವನು ಖಡ್ಗ ಮತ್ತು ಫಲಕಾಯುಧದಿಂದ ಸಿಂಹದ ತಲೆಗೆ ಹೊಡೆದನು.  ಕ್ಷುರಪ್ರವೆಂಬ ಆಯುಧದಿಂದ ಅವನ ಆಯುಧಗಳನ್ನು ಕತ್ತರಿಸಿದಳು. ನಿಶುಂಭನು ಶಕ್ತಿ ಆಯುಧವನ್ನು ದೇವಿಯ ಮೇಲೆ ಪ್ರಯೋಗಿಸಿದನು. ಚಕ್ರದಿಂದ ದೇವಿಯು ಅದನ್ನು ತುಂಡರಿಸಿದಳು.  ನಿಶುಂಭನು ಶೂಲಾಯುಧವನ್ನು ತೆಗೆದುಕೊಂಡನು.  ದೇವಿಯು ಅದನ್ನು ಮುಷ್ಟಿಪ್ರಹಾರದಿಂದ ಪುಡಿಮಾಡಿದಳು.  ನಿಶುಂಭನು ಎಸೆದ ಗದೆಯನ್ನು ತ್ರಿಶೂಲದಿಂದ ಭೇದಿಸಿ ಸುಟ್ಟಳು. ಕೊಡಲಿಯನ್ನು ಎತ್ತಿಕೊಂಡು ಬಂದ ನಿಶುಂಭನನ್ನು ಬಾಣದಿಂದ ಹೊಡೆದುರುಳಿಸಿದಳು.  ಅವನು ಮೂರ್ಛಿತನಾದನು.  ಆಗ ಶುಂಭನು ಚಂಡಿಕೆಯೊಡನೆ ಯುದ್ಧಕ್ಕೆ ಬಂದನು.  ಶುಂಭನಿಂದ ಪ್ರಯೋಗಿಸಲ್ಪಟ್ಟ ಶಕ್ತಿ ಆಯುಧವನ್ನು ಉಲ್ಕಾಯುಧದಿಂದ ನಿವಾರಿಸಿದಳು.  ಚಂಡಿಕಾದೇವಿಯು ಶುಂಭಾನನ್ನು ಮೂರ್ಛಿತಗೊಳಿಸಿದಳು. ಆ ವೇಳೆಗೆ ನಿಶುಂಭನು ಮೂರ್ಛೆಯಿಂದ ಎದ್ದು ಬಾಣ - ಚಕ್ರಾಯುಧಗಳು - ಗದೆ - ಶೂಲ ಗಳಿಂದ ದಾಳಿಮಾಡಿದನು. ದೇವಿಯ ಶೂಲದಿಂದ ಪ್ರಹರಿಸಲ್ಪಟ್ಟ ನಿಶುಂಭನ ಹೃದಯದಿಂದ ಇನ್ನೊಬ್ಬ ಪುರುಷನು ಹೊರಬಂದನು. ಅವನು ಹೊರಬರುವುದರೊಳಗೆ ದೇವಿಯು ಅವನ ತಲೆ ಕತ್ತರಿಸಿ ನಿಶುಂಭನನ್ನು ವಧಿಸಿದಳು.

 

ಅಧ್ಯಾಯ ೧೦

ಆಗ ಶುಂಭನು ದೇವಿಯನ್ನು ಬ್ರಹ್ಮಾಣೀ ಮತ್ತಿತರ ಮಾತೃಗಣದೇವತೆಯರ ಸಹಾಯದಿಂದ ಗೆಲ್ಲುತ್ತಿರುವುದಾಗಿ ದೂಷಿಸಿದನು. ಆಗ ಎಲ್ಲಾ ಮಾತೃದೇವತೆಗಳೂ ದೇವಿಯಲ್ಲಿ ಐಕ್ಯರಾದರು.  ನಂತರ ಶುಂಭ ಮತ್ತು ದೇವಿಯರ ಮಧ್ಯೆ ಅಸ್ತ್ರ - ಪ್ರತ್ಯಸ್ತ್ರಗಳಿಂದ ಘೋರ ಸಮರ ನಡೆಯಿತು.

ನೂರಾರು ಬಾಣಗಳನ್ನು ಸುರಿಸುತ್ತಿದ್ದ ಶುಂಭನ ಬಿಲ್ಲನ್ನು ದೇವಿ ತನ್ನ ಬಾಣಗಳಿಂದ ಕತ್ತರಿಸಿದಳು.  ಅವನ ಶಕ್ತಿ ಆಯುಧವನ್ನು ತನ್ನ ಚಕ್ರಾಯುಧದಿಂದ ಕತ್ತರಿಸಿದಳು. ಶುಂಭನ ಚಂದ್ರಹಾಸ ಖಡ್ಗವನ್ನೂ, ಫಲಕಾಯುಧವನ್ನೂ ದೇವಿಯ ಬಾಣಗಳು ಕತ್ತರಿಸಿದವು.  ಅವನ ರಥದ ಕುದುರೆಗಳನ್ನೂ, ಸಾರಥಿಯನ್ನೂ ಧ್ವಂಸಗೊಳಿಸಿದಳು. ಶುಂಭನು ಪ್ರಯೋಗಿಸಿದ ಮುದ್ಗರವನ್ನು ತನ್ನ ಬಾಣಗಳಿಂದ ತುಂಡರಿಸಿದಳು.  ವೇಗದಿಂದ ಬಂದು ತನ್ನ ಮುಷ್ಟಿಯಿಂದ ದೇವಿಯ ಹೃದಯಕ್ಕೆ ಹೊಡೆದ ಶುಂಭನನ್ನು ದೇವಿ ಪ್ರತಿಯಾಗಿ ಘಾತಿಸಿದಳು.  ನೆಲಕ್ಕುರುಳಿದ ಶುಂಭನು ಎದ್ದು ದೇವಿಯನ್ನು ಆಕಾಶಕ್ಕೆ ಎತ್ತಿ ಒಯ್ದನು. ಅಲ್ಲೇ ದೇವಿಯು ಆಧಾರವಿಲ್ಲದೇ, ಶುಂಭನೊಡನೆ ಬಾಹುಯುದ್ಧ ಮಾಡಿದಳು. ಅವನನ್ನು ಎತ್ತಿ ತಿರುಗಿಸಿ ನೆಲಕ್ಕೆ ಎಸೆದಳು.  ಪುನಃ ಎದ್ದು ಧಾವಿಸಿ ಬಂದ ಶುಂಭನನ್ನು ಶೂಲದಿಂದ ಭೇದಿಸಿದಳು.  ಆಗ ಶುಂಭನು ಹತನಾದನು. ಶುಂಭಾಸುರನ ಉಪದ್ರವದಿಂದ ನಿಂತಿದ್ದ ಯಜ್ಞಾದಿ ಕರ್ಮಗಳು ಪುನಃ ನಡೆಯುವಂತಾಗಿ ಅಗ್ನಿಗಳು ಜ್ವಲಿಸಿದವು.

 

ಅಧ್ಯಾಯ ೧೧

ದೇವತೆಗಳು ಕಾತ್ಯಾಯನೀ ಎಂದು ಕರೆಯುವ ಚಂಡಿಕಾದೇವಿಯನ್ನು ಸ್ತುತಿಸಿದರು. ದೇವೀ ನಾರಾಯಣಿ ನಮೋಸ್ತುತೇ ಎಂದು ವಿಧವಿಧವಾಗಿ ಸ್ತುತಿಸಿದರು.  ಸುಪ್ರೀತಳಾದ ದೇವಿಯು ದೇವತೆಗಳಿಗೆ ಅಭಯವನ್ನು ನೀಡಿದಳು.  ಮುಂದೆ ಬರುವ ವಿಪ್ರಚಿತ್ತಿ ಎಂಬ ಸಾಧುದ್ವೇಷಿಯನ್ನು ವಧಿಸುವುದಾಗಿಯೂ,  ರಕ್ತದಂತಿಕಾ, ಅಯೋನಿಜಾ, ಶತಾಕ್ಷೀ,  ಶಾಕಂಭರೀ, ದುರ್ಗಾ, ಭೀಮಾದೇವೀ, ಭ್ರಾಮರೀ,  ಎಂಬ ರೂಪಗಳಿಂದ ಬರುವುದಾಗಿ ಹೇಳಿದಳು.

 

ಅಧ್ಯಾಯ ೧೨

ಮಧು-ಕೈಭಟ, ಮಹಿಷಾಸುರ ಮತ್ತು ಶುಂಭನಿಶುಂಭರ ವಧೆಯನ್ನು ಮೂರು ಚರಿತ್ರೆಗಳು ಎನ್ನಲಾಗಿದ್ದು ಇವುಗಳ ಪಠಣದ ಫಲವನ್ನು ದೇವಿಯೇ ವಿವರಿಸಿ ಅಂತರ್ಧನಳಾದಳು.  ನಂತರ ದೇವತೆಗಳು ತಮ್ಮ ಹವಿರ್ಭಾಗವನ್ನು ಸ್ವೀಕರಿಸುತ್ತಾ ತಮ್ಮ ಅಧಿಕಾರಗಳನ್ನು ನೆರವೇರಿಸಿದರು.  ದೈತ್ಯರು ರಾಜ್ಯ ಕಳೆದುಕೊಂಡು ಪಾತಾಳಕ್ಕೆ ಹೋದರು.

 

ಅಧ್ಯಾಯ ೧೩

ಮಹಾಮಾಯೆಯು ಜಗತ್ತನ್ನು ಆವರಿಸಿಕೊಂಡು ತತ್ವಜ್ಞಾನವನ್ನು ನೀಡುವಳು. ವಿವೇಕಿಗಳನ್ನೂ ತನ್ನ ಮೋಹದಿಂದ ಆವರಿಸುವಳು. ಸುರಥ ರಾಜನೂ ಸಮಾಧಿ ವೈಶ್ಯನೂ ದೇವೀಸೂಕ್ತದೊಡನೆ ತಪಸ್ಸನ್ನು ಮಾಡಿ ದೇವಿಯನ್ನು ಸಂತುಷ್ಟಗೊಳಿಸಿ ಅವಳಿಂದ ತಾವು ಕಳೆದುಕೊಂಡಿದ್ದ ರಾಜ್ಯ - ಸಂಪತ್ತನ್ನು ಮರು ಗಳಿಸಿಕೊಂಡರು.  ರಾಜನು ಸಾವರ್ಣಿಕ ಮನು ಪಟ್ಟವನ್ನು ಗಳಿಸಿಕೊಂಡನು.  ವೈಶ್ಯನು ಸಂಸಿದ್ಧಿಯನ್ನು ಪಡೆಯಲು ಬೇಕಾದ ಜ್ಞಾನವನ್ನು ಪಡೆದನು.

 

No comments:

Post a Comment