ಋಗ್ವೇದ ಹಾಗೂ ಜ್ಯೋತಿಷ್ಯ ಶಾಸ್ತ್ರ ವಿದ್ವಾಂಸರು ಬ್ರಹ್ಮ ಶ್ರೀ. ಮಂಜುನಾಥ ಶರ್ಮ
ವೇದ ಶಿಕ್ಷಣ ಸಮಿತಿಯ ಸದಸ್ಯರು ದಿನಾಂಕ ಗತಕಲಿ 512೪ – ಆಷಾಢ ಕೃಷ್ಣ ತ್ರಯೋದಶಿ, ಶನಿವಾರದಂದು (15ನೇ ಜುಲೈ 2023) ಶ್ರೀ. ಮಂಜುನಾಥ ಶರ್ಮ ಅವರನ್ನು ಭೇಟಿ ಮಾಡಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ಶ್ರೀಯುತ ಮಂಜುನಾಥ ಶರ್ಮ ಅವರು ಶ್ರೀ ರಾಮಚಂದ್ರ ಐತಾಳ ಮತ್ತು ಶ್ರೀಮತಿ ಸತ್ಯಭಾಮಾ ಅವರ ಜ್ಯೇಷ್ಹ ಪುತ್ರರು. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಸಮೀಪದ ಪುಟ್ಟ ಗ್ರಾಮವಾದ ಮಣೂರಿನಲ್ಲಿ 12 - 08 – 1932 ರಂದು ಜನನ. ಇವರಿಗೆ ಇಬ್ಬರು ಕಿರಿಯ ಸಹೋದರರು.
ಶೃಂಗೇರಿಯಲ್ಲಿ 1947ರಿಂದ ತಮ್ಮ ಹದಿನಾರನೆಯ ವಯಸ್ಸಿನಿಂದ ಅಧ್ಯಯನವನ್ನು ಪ್ರಾರಂಭಿಸಿದ ಶ್ರೀ. ಮಂಜುನಾಥ ಶರ್ಮ ಅವರು ನಾಲ್ಕು ವರ್ಷಗಳ ಋಗ್ವೇದ ಅಧ್ಯಯನವನ್ನುಮುಗಿಸಿ, ಮುಂದಿನ ನಾಲ್ಕು ವರ್ಷಗಳ ಕಾಲ ಸಾಹಿತ್ಯದ ಅಧ್ಯಯನವನ್ನು ಮಾಡಿದರು. ಋಗ್ವೇದ ಅಧ್ಯಯನವು ಪಾದಸಂತೆ, ಅರ್ಥಋಕ್ ಸಂತೆ ಮತ್ತು ಋಕ್ ಸಂತೆಗಳ ಅಧ್ಯಯನದೊಂದಿಗೆ ಬೆಳಗ್ಗೆ 8ರಿಂದ 11 ರವರೆಗೆ ನಡೆಯುತ್ತಿತ್ತು. ನಂತರ ಭೋಜನದ ನಂತರ ಮಧ್ಯಾಹ್ನ ಅದರ ಅಭ್ಯಾಸ ಆಗುತ್ತಿತ್ತು. ನಂತರ ಸಂಜೆ ಶಾರದಾ ದೇವಿಯ ಸನ್ನಿಧಿಯಲ್ಲಿ 6ರಿಂದ 8ರವರೆಗೆ ಮಂತ್ರಗಳ ಪಾರಾಯಣ ಮಾಡಲಾಗುತ್ತಿತ್ತು. ನಂತರದ ಐದು ವರ್ಷಗಳು ಜ್ಯೋತಿಷ್ಯದ ಅಧ್ಯಯನವನ್ನು ಶ್ರೀ ಶಂಕರನಾರಾಯಣ ಜೋಯಿಸರಲ್ಲಿ ಮಾಡಿದರು. ಶ್ರೀಯುತರು ತರ್ಕಶಾಸ್ತ್ರವನ್ನೂ ಅಭ್ಯಸಿಸಿದ್ದಾರೆ. ಹಿಂದೀ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸಿದ ಶ್ರೀ ಮಂಜುನಾಥ ಶರ್ಮ ಅವರು ರಾಜವಿಶಾರದ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ವಿದ್ಯಾರ್ಥಿದೆಸೆಯಲ್ಲಿ ಕಠಿಣ ಪರಿಶ್ರಮದಿಂದ ಅಧ್ಯಯನವನ್ನು ಮಾಡಿದರು. ಉಡಲು ಇದ್ದ ಒಂದು ಜೊತೆ ಪಂಚೆ-ಶಲ್ಯ, ಮಲಗಲು ಇದ್ದ ಒಂದು ಗೋಣೀ ಚೀಲ ಮತ್ತು ಮಠದ ಪ್ರಸಾದದ ಮತ್ತು ಶೃಂಗೇರಿ ಮಠಾಧೀಶರಾಗಿದ್ದ ಶ್ರೀ. ಚಂದ್ರಶೇಖರ ಭಾರತೀ ಸ್ವಾಮಿಗಳ ಆಶೀರ್ವಾದದ ಬಲದಿಂದ ವಿದ್ಯಾಭ್ಯಾಸ ನಡೆಯಿತು.
ಶೃಂಗೇರಿಯ ಪಾಠಶಾಲೆಯಲ್ಲಿ ಅಧ್ಯಾಪನ ಮಾಡಿದ ಶ್ರೀ. ಮಂಜುನಾಥ ಶರ್ಮ ಅವರು ಸಾಹಿತ್ಯ, ಜ್ಯೋತಿಷ್ಯ, ವ್ಯಾಕರಣ, ದರ್ಮಶಾಸ್ತ್ರ ಮತ್ತು ಹಿಂದೀ ವಿಷಯಗಳನ್ನು ಬೋಧಿಸುತ್ತಿದ್ದರು. ಅವರ ಪ್ರತಿಭಾ ಸಾಮರ್ಥ್ಯ ಕಂಡು ಅಂದಿನ ಸ್ವಾಮಿಗಳಾದ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾ ಸ್ವಾಮಿಗಳು ಮಠದ ಮಕ್ಕಳಿಗೆ ಹಿಂದಿ ಪಾಠ ಮಾಡುವಂತೆ ಆದೇಶವಿತ್ತರು. ಅದು ಮಠದಲ್ಲಿ ಸಿಕ್ಕ ಮಾನ್ಯತೆಯಾಗಿತ್ತು. ಧರ್ಮಶಾಸ್ತ್ರ, ಆಗಮ, ತಂತ್ರ ಶಾಸ್ತ್ರ, ಜ್ಯೋತಿಷ, ವಾಸ್ತು ಶಾಸ್ತ್ರಗಳಲ್ಲೂ ಅಗಾಧ ಪಾಂಡಿತ್ಯ ಪಡೆದರು. ಇವರು ಸ್ವ ಶ್ರಮದಿಂದ ಕಲಿತ ವಿಷಯಗಳು ಹಲವಾರು. ಶೃಂಗೇರಿ ಮಠದಲ್ಲಿ ಶ್ರೀಯುತರು ಆಸ್ಥಾನ ವಿದ್ವಾಂಸರಾದರು.
ಮಠದಲ್ಲಿ ವಿದ್ವತ್ ಸ್ಥಾನ ಅಲಂಕರಿಸಿದ ಕೆಲವೇ ವರ್ಷಗಳಲ್ಲಿ ಶರ್ಮಾಜಿಯವರ ಜೀವನಕ್ಕೆ ಜೊತೆಯಾದವರು ಶ್ರೀಮತಿ ಶಾಂತಾದೇವಿ. ದಂಪತಿಗಳಿಗೆ ಮೂರು ಮಕ್ಕಳು.. ಎರಡು ಗಂಡು, ಒಂದು ಹೆಣ್ಣು. (ಶ್ರೀನಾಥ ಶರ್ಮಾ, ಸತ್ಯನಾರಾಯಣ ಶರ್ಮಾ, ಸಂಧ್ಯಾ ). ತಮ್ಮ 54ನೇ ವಯಸ್ಸಿನಲ್ಲಿ ಶೃಂಗೇರಿಯಿಂದ ಬೆಂಗಳೂರಿಗೆ ಹೋಗಲು ನಿರ್ಧರಿಸಿದರು. ಸಹೃದಯಿಗಳಾದ ಚಂದ್ರಶೇಖರ ದೀಕ್ಷಿತರ ಸಹಾಯದಿಂದ ಬೆಂಗಳೂರಿನ ವಿ.ವಿ. ಪುರಂ ನಲ್ಲಿರುವ ಶ್ರೀವಾಲ್ಮೀಕಿ ಆಂಜನೇಯ ದೇವಸ್ಥಾನದಲ್ಲಿ ಅರ್ಚಕ ವೃತ್ತಿಯನ್ನ ಪ್ರಾರಂಭಿಸಿದರು. ಪೌರೋಹಿತ್ಯ, ಜ್ಯೋತಿಷ್ಯ ವೃತ್ತಿಯಲ್ಲಿ ನಿರತರಾದರು. ಬೆಂಗಳೂರಿನಲ್ಲಿ ಶ್ರೀ ಶಾರದಾ ಶಂಕರ ಮಿತ್ರ ಸಂಘ ಎಂಬ ಸಂಘದವತಿಯಿಂದ ಹಲವಾರು ಸನ್ನಿಧಾನಗಳಲ್ಲಿ ಸಮಾಜದ ಒಳಿತಿಗಾಗಿ ನಡೆಯುತ್ತಿದ್ದ ದುರ್ಗಾ ಸಪ್ತಶತಿ, ಮನ್ಯು ಸೂಕ್ತ, ದುರ್ಗಾ ಸೂಕ್ತಗಳಂಥ ಮಹಾ ಮಂತ್ರಗಳ ಜಪ-ಪಾರಾಯಣಗಳನ್ನು ನಡೆಸಿದರು. ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಷನ್ ಗೆ ಕೈಮೀರಿದ ಧನ ಸಹಾಯ ಮಾಡಿ ತನ್ಮೂಲಕ ಬಡ ಬ್ರಾಹ್ಮಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದೂ ಇದೆ. ಜನ ಸಾಮನ್ಯರಷ್ಟೇ ಅಲ್ಲದೆ ಜನ ನಾಯಕರೂ - ಜನ ಪ್ರತಿನಿಧಿಗಳೂ ಕೂಡ ಇವರ ಮಾರ್ಗದರ್ಶನ ಪಡೆದು ಸಮಾಜಕ್ಕೆ ಸಹಕಾರಿಯಾಗಿದ್ದಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಆದಿಯಾಗಿ ಅನೇಕ ರಾಜಕೀಯ ಮುಖಂಡರು ಶ್ರರ್ಮಾಜಿಯವರ ಮಾರ್ಗದರ್ಶನ ಪಡೆದಿದ್ದಾರೆ. ದಿವಂಗತ ಬಂಗಾರಪ್ಪನವರು ಮುಂದೆ ಮುಖ್ಯಮಂತ್ರಿಯಾಗುವರು ಎಂಬ ಭವಿಷ್ಯವನ್ನು ಹೇಳಿದ ಸಾಮರ್ಥ್ಯ ಇವರದು. ಇಷ್ಟೆಲ್ಲಾ ಕಾರ್ಯ ಸಾಧನೆಗಳ ಜೊತೆಗೆ ಸ್ವಾಧ್ಯಾಯ ಪ್ರಿಯರಾದ ಶರ್ಮಾಜಿಯವರು ಅತ್ಯಂತ ಮೌಲ್ಯಯುತವಾದ ಭಾರತದ ಚಾತುರ್ವಣ್ಯ ಪದ್ದತಿಯ ಆಳ-ಅಗಲಗಳ ಕುರಿತಾದ ಭಾರತ ಚಾತುರ್ವಣ್ಯ ಸಮೀಕ್ಷೆ ಎಂಬ ಮಹತ್ತರ ಹೊತ್ತಿಗೆಯನ್ನು ಹೊರತಂದಿದ್ದಾರೆ. ಜೊತೆಗೆ ಜ್ಯೋತಿಷ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಾಶರರ ಸಂಸ್ಕೃತ ಪ್ರೌಢ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೀಗೆ ಅವರ ಅಧ್ಯಯನ ಕ್ಷೇತ್ರದ ಕೃಷಿ ಅಪಾರ.
ಅವರ ವಿದ್ವತ್ತು, ಪ್ರತಿಭಾ ಸಾಮರ್ಥ್ಯಕ್ಕೆ ಸಂದ ಪುರಸ್ಕಾರಗಳು ಹಲವಾರು. 1974ರಲ್ಲಿ ಉತ್ತರ ಭಾರತದಲ್ಲಿ ನಡೆದ ಜ್ಯೋತಿಷ ಸಮ್ಮೇಳನದಲ್ಲಿ ‘‘ಜ್ಯೋತಿಷ ಭೂಷಣ ’’ ಪ್ರಶಸ್ತಿ, 1984ರಲ್ಲಿ ಜಗದ್ಗುರು ಮಹಾಸಂಸ್ಥಾನ ಶೃಂಗೇರಿಯಲ್ಲಿ ಆದರ್ಶ ಅಧ್ಯಾಪಕ ಪ್ರಶಸ್ತಿ, 1988ರಲ್ಲಿ ತ್ರಿಮತಸ್ಥ ವೈದಿಕ ಧರ್ಮ ಸಮ್ಮೇಳನದಲ್ಲಿ ವೇದವಾರಿಧಿ ಪ್ರಶಸ್ತಿ, 1992ರಲ್ಲಿ ಜ್ಯೋತಿಷ ಶಾಸ್ತ್ರದ ವಿದ್ವತ್ತಿಗೆ ಕರ್ನಾಟಕ ಸರ್ಕಾರದಿಂದ ರಾಜ್ಯ ಪ್ರಶಸ್ತಿ, 1999 ರಲ್ಲಿ ನರಸಿಂಹ ಪ್ರಶಸ್ತಿ, 2007 ರಲ್ಲಿ ಶ್ರೀ ಯಡತೊರೆ ಶ್ರೀ ಯೋಗಾನಂದ ಸರಸ್ವತಿ ಪೀಠದಿಂದ ಪುರಸ್ಕಾರ, 2011 ರಲ್ಲಿ ವ್ಯಾಸ ಜ್ಯೋತಿ ಪುರಸ್ಕಾರ – ಇವರಿಗೆ ಸಂದಿವೆ.
ಶ್ರೀಯುತರು ಈಗ ಬೆಂಗಳೂರಿನ ಅರುಣಾಚಲ ಲೇಔಟ್ ನ ತಮ್ಮ ಸ್ವಗೃಹದಲ್ಲಿ ಕಳೆಯುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ಸಹ ದೈನಂದಿನ ಸಂಧ್ಯಾ, ದೇವತಾಪೂಜೆ, ಮತ್ತಿತರ ಕಾರ್ಯಗಳ ಜೊತೆಗೆ ವೇದಾಧ್ಯಯನ, ಪಾರಾಯಣ, ಬ್ರಹ್ಮ ಯಜ್ಣ್ಯ, ಸ್ತೋತ್ರಪಾರಾಯಣಗಳನ್ನು ನಿರಂತರವಾಗಿ ಅನುಷ್ಠಾನ ಮಾಡುತ್ತಿದ್ದಾರೆ.
No comments:
Post a Comment